ಕುಲಪರ್ವತಗಳು

ಒಂದು ದ್ವೀಪದ ಅಥವಾ ಭೂಪ್ರದೇಶದ ಎಲ್ಲೆ ಕಟ್ಟನ್ನು ತಿಳಿಸುವ ಮೂಲಪರ್ವತಗಳಿವು. ಜಂಬು, ಪಕ್ಷ, ಶಾಲ್ಮಲಿ, ಕುಶ, ಕ್ರೌಂಚ, ಶಾಕ ಮತ್ತು ಪುಷ್ಕರ ದ್ವೀಪಗಳಿಗೆ ಸಂಬಂಧಿಸಿದಂತೆ ವಿವಿಧ ಹೆಸರಿನ ಕುಲಪರ್ವತಗಳಿವೆ.

ಮಹೇಂದ್ರ, ಮಲಯ, ಸಹ್ಯ, ಶಕ್ತಿಮಾನ್, ರುಕ್ಷ, ಮತ್ತು ವಿಂಧ್ಯಗಳು ಜಂಬೂ ದ್ವೀಪದ ಭರತವರ್ಷದ ಸಪ್ತ ಕುಲಪರ್ವತಗಳು, ಅಷ್ಟದಿಗ್ಗಜಗಳು ಭೂಮಿಯನ್ನು  ಕೆಳಕ್ಕೆ ಬೀಳದಂತೆ ಹೊತ್ತಿರುವಂತೆ ಕುಲಪರ್ವತಗಳು ಭೂಮಿಯನ್ನು ಹಾರಿ ಹೋಗದಂತೆ ಒತ್ತಿ ಹಿಡಿದಿವೆಯೆನ್ನಲಾಗಿದೆ. 

ಜೈನಪುರಾಣಗಳಲ್ಲಿ ಹೇಳಿರುವ ಪರ್ವತಗಳು ಇವು; ಹಿಮವಂತ,  ಮಹಾಹಿಮವಂತ, ನಿಷಧ, ನೀಲ, ರುಕ್ಮಿ, ಶಿಖರಿ. ಇವು ಜಂಬೂದ್ವೀಪದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹೋಗುತ್ತ ಕ್ರಮವಾಗಿ ಪೂರ್ವ-ಪಶ್ಚಿಮವಾಗಿ ಹಬ್ಬಿ ಭೂಭಾಗವನ್ನು ಸಪ್ತಕ್ಷೇತ್ರಗಳಾಗಿ ವಿಭಾಗಿಸಿವೆ.			
(ಬಿ.ಜಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ